ಆಗಸ್ಟ್ 31 ರಿಂದ ಮೂರು ದಿನಗಳ ಕಾಲ ಆರಾಧನೆ ನಡೆಯುತ್ತಿದ್ದು ಇಂದು ಮಧ್ಯಾರಾಧನೆ ಪ್ರಯುಕ್ತ ಶ್ರೀ ಜಗನ್ನಾಥ ದಾಸರ ಕಂಬಕ್ಕೆ ದಿವ್ಯಾಲಂಕಾರ ಮಾಡಲಾಗಿತ್ತು.
ಜಗನ್ನಾಥದಾಸರು: ಹರಿದಾಸ ಪಂಥದ ಪ್ರಮುಖರಲ್ಲಿ ಜಗನ್ನಾಥ ದಾಸರು ಒಬ್ಬರಾಗಿದ್ದು ಕ್ರಿ.ಶ.1728-1809 ರವರೆಗೆ ಕನ್ನಡನಾಡಿನ ಹರಿದಾಸ ಪರಂಪರೆಯನ್ನು ಬೆಳಗಿದವರು. ಆಧ್ಯಾತ್ಮಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೀ ಜಗನ್ನಾಥ ದಾಸರು ತಮ್ಮ ಅಪರೋಕ್ಷ ಜ್ಞಾನದಿಂದ `ರಂಗನೊಲಿದ ದಾಸ' ಎಂದೂ `ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ ರಂಗೋಲಿ ದಾಸ' ರೆಂದೂ ಅವರನ್ನು ಕರೆಯಲಾಗುತ್ತಿತ್ತು.

ಹುಟ್ಟು: ಇವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಟ್ಟಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ.
ಬದುಕು: ಶ್ರೀನಿವಾಸನ ವಿದ್ಯಾಭ್ಯಾಸ ಮಂತ್ರಾಲಯದ ಸುಪ್ರಸಿದ್ದ ಶ್ರೀವರದೇಂದ್ರ ತೀರ್ಥರಲ್ಲಿ ಪಡೆದು, ಆಚಾರ್ಯ ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬಂದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನ ಪಂಡಿತರೆAದು ಪ್ರಸಿದ್ಧರಾದರು. ಇವರು ಗೋಪಾಲ ದಾಸರನ್ನು ಗುರುಗಳಾಗಿ ಸ್ವೀಕರಿಸಿದರು. ಗುರುವಿನ ಅಪ್ಪಣೆಯಂತೆ ಪಂಢರಪುರಕ್ಕೆ ತೆರಳಿ, ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ `ಜಗನ್ನಾಥ ವಿಠಲ' ಎಂಬ ಅಂಕಿತದ ಕಲ್ಲೊಂದು ಲಭಿಸಿತು. ಅಂದಿನಿAದ ಅವರು ಜಗನ್ನಾಥ ದಾಸರೆನಿಸಿ, ದೈವದತ್ತವಾದ ಅಂಕಿತದಲ್ಲಿ ದಿವ್ಯ ನಾಮ ಸಂಕೀರ್ತನೆ ಮಾಡುತ್ತಿದ್ದರು.
ಹರಿಕಥಾಮೃತಸಾರ: ರಾಯಚೂರು ಜಿಲ್ಲೆಯ ಮಾನ್ವಿ ಬೃಂದಾವನದಲ್ಲಿ ಶ್ರೀ ಜಗನ್ನಾಥ ದಾಸರ ಕಂಭ ಇದೆ. ಸದ್ಭಕ್ತರು ಈ ಕಂಬವನ್ನು ನಮಿಸಿ ಕೃತಾರ್ಥರಾಗುತ್ತಿದ್ದಾರೆ. ಶ್ರೀ ಜಗನ್ನಾಥ ದಾಸರು ಕನ್ನಡ ಸಾಹಿತ್ಯಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದು ಅವರ ಹರಿಕಥಾಮೃತಸಾರವು ೩೨ ಸಂಧಿಗಳು ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕೃತಿಯಾಗಿದೆ. ಇಲ್ಲಿನ ಮಾಧ್ವಮತ ತತ್ವ ನಿರೂಪಣೆ ಪ್ರಮಾಣಭೂತವಾದುದು. ಇದನ್ನು ದ್ವೈತ ಸಿದ್ಧಾಂತದ ಒಂದು ಪುಟ್ಟ ಕೋಶವೆನ್ನಬಹುದು. ಇದರ ತಂತ್ರಸಾರ - ಹಾಡು. ತತ್ವ ಸುವ್ವಾಲಿ - ತ್ರಿಪದಿಯಾಗಿದೆ.

ಕೀರ್ತನೆಗಳು: ಅರಿತವರಿಗತಿಸುಲಭ ಹರಿಯ ಪೂಜೆ... ಅರಿಯದವ ನಿರ್ಭಾಗ್ಯತರ ಲೋಕದೊಳಗೆ, ದಾಸೋಹಂ ತವ ದಾಸೋಹಂ.... ವಾಸುದೇವ ವಿತತಾಘಸಂಘ ತವ ದಾಸೋಹಂ, ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವನಿತ್ತು ಕಾಯೊ ಕರುಣಾ ಸಾಗರ, ಸಿರಿರಮಣ ತವಚರಣ ದೊರಕುವುದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು... ನರ ಹರಿಯೆ ನಿನ್ನ ನಾಮ ಸ್ಮರಣೆ ಮಾಡದೇ ನರಕಕ್ಕೆ ಗುರಿಯಾದೆನೊ ಹರಿಯೇ... ಎನ್ನುವ ಕೀರ್ತನೆಗಳು ಭಕ್ತರ ನಾಲಿಗೆಯ ಮೇಲೆ ಕಳೆದ ನೂರಾರು ವರ್ಷಗಳಿಂದ ಹರಿದಾಡುತ್ತಿವೆ. ಆ ಮೂಲಕ ಪಂಢರಿನಾಥನ ಬಗ್ಗೆ ಭಕ್ತಿ ಮತ್ತು ದಾಸ್ಯ ಭಾವ ಮೂಡುವಂತೆ ಮಾಡುತ್ತಿವೆ.