LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆ.೦4 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್: ಕುಲಪತಿ ಪ್ರೊ.ಎಂ.ಮುನಿರಾಜು

ಬಳ್ಳಾರಿ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24 ನೇ ಸಾಲಿನ 13 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ಸೆ.04 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.

ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಪರೀಕ್ಷಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ನ ನಿರ್ದೇಶಕರಾದ ಪ್ರೊ.ಅವಿನಾಶ್ ಚಂದ್ರ ಪಾಂಡೆ ಅವರು ಮಾಡಲಿದ್ದಾರೆ ಎಂದು ತಿಳಿಸಿದರು.



ಉನ್ನತ ಶಿಕ್ಷಣ ಸಚಿವರು ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ವಾರ್ಷಿಕ ಘಟಿಕೋತ್ಸವದ ನೇತೃತ್ವವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಮುನಿರಾಜು ಅವರು ವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರುಗಳು, ಕುಲಸಚಿವ ನಾಗರಾಜು.ಸಿ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ ಅವರುಗಳು ಕುಲಪತಿಗಳಿಗೆ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

ಘಟಿಕೋತ್ಸದ ವಿಶೇಷತೆಗಳು; 3 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇರ್ಫಾನ್ ರಜಾಕ್, ಡಾ.ವಸುಂಧರಾ ಭೂಪತಿ, ಬಾವಿಹಳ್ಳಿ ನಾಗನಗೌಡ ಸೇರಿ ಮೂರು ಮಹನೀಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.

ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 59 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ ೭೫ ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ರ್‍ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.

04 ಚಿನ್ನದ ಪದಕ ಪಡೆದ ವಿದ್ಯಾರ್ಥಿ:

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಹಂಸ.ಎನ್ ಅವರು ೦೪ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

03 ಚಿನ್ನದ ಪದಕ ಪಡೆದ ವಿದ್ಯಾರ್ಥಿ:

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ರಾಜೇಶ್ವರಿ ಅವರು 03 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.



02 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿ:

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮನೋಜ್, ರಸಾಯನಶಾಸ್ತ್ರ ವಿಭಾಗದ ಸುಹಾನ ತಸ್ಲೀಮ್, ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಶಿಲ್ಪ, ಬಿಬಿಸಿ ಕಾಲೇಜ್ ನ ಬಿಕಾಂ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಮತ್ತು ವೀರಶೈವ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ಮಹಮ್ಮದ್ ನಕೀಬಲಿ ಇವರುಗಳು ಪಡೆದುಕೊಂಡಿದ್ದಾರೆ.

ಪರೀಕ್ಷಾ ಫಲಿತಾಂಶ:

ವಿಶ್ವವಿದ್ಯಾಲಯದ ಸ್ನಾತಕ ಪದವಿಯಲ್ಲಿ ಒಟ್ಟು 19,176 ಸ್ನಾತಕ ಪದವಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆದು ತಮ್ಮ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1,845 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.

ಗೌರವ ಡಾಕ್ಟರೆಟ್ ಪಡೆದ ಮೂರು ಜನರ ಪರಿಚಯ ಇಂತಿದೆ:



ಇರ್ಫಾನ್ ರಜಾಕ್:

ಇರ್ಫಾನ್ ರಜಾಕ್ ಅವರು ಮೂಲತಃ ಬೆಂಗಳೂರಿನವರು. ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್‌ನ ಗೌರವಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆಗಾಗಿ ಖ್ಯಾತಿ ಪಡೆದಿದ್ದಾರೆ. ನಾಲ್ಕು ದಶಕಗಳ ವಾಣಿಜ್ಯ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹೂಡಿಕೆ ನಡೆಸಿ ನಾಡಿನ ಖ್ಯಾತ ಉದ್ಯಮಿಗಳಾಗಿ ಮುನ್ನಡೆದಿದ್ದಾರೆ.

ಸತತವಾದ ಅಭಿವೃದ್ಧಿ, ಸಾಮಾಜಿಕ ಹೊಣೆಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಜನೋಪಕಾರಿ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆಯ ಮೂಲಕ ಕೈಗೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎನ್‌ಡಿಟಿವಿ ಹಾಲ್ ಆಫ್ ಫೇಮ್, ಸಿಆರ್‌ಇಡಿಎಐ ಗೌರವ ಪ್ರಶಸ್ತಿ ಹಾಗೂ ಎಂಟ್ರಪ್ರುನರ್ ಆಫ್ ದಿ ಇಯರ್ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಯಲ್ ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ ಸರ್ವೇಯರ್ (ಎಫ್‌ಆರ್‌ಐಸಿಎಸ್) ನ ಫೆಲೊ ಆಗಿ ೨೦೧೩ರಿಂದ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದಾರೆ.



ಡಾ.ವಸಂಧರಾ ಭೂಪತಿ:

ಡಾ.ವಸಂಧರಾ ಭೂಪತಿ ಅವರು ರಾಯಚೂರಿನಲ್ಲಿ ಜನಿಸಿದವರು. ತಮ್ಮ ವಿಶಿಷ್ಟ ವೈದ್ಯಕೀಯ ಸೇವೆ, ಸಾಹಿತ್ಯ, ಸಮಾಜಸೇವೆ ಮತ್ತು ಪತ್ರಿಕಾ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರ, ವೈದ್ಯಕೀಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ. ಆರೋಗ್ಯ ಸಂಗತಿ, ಮನೆಯಂಗಳದಲ್ಲಿ ಔಷಧಿವನ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ೬೫ಕ್ಕೂ ಹೆಚ್ಚು ಆರೋಗ್ಯ ಕೃತಿಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿವೆ. ಸಾರ್ವಜನಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಹೆಸರನ್ನು ಪಸರಿಸಿದ್ದಾರೆ. ಇವರ ಸೇವೆಗೆ ಅನೇಕ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರ ಮುಡಿಗೇರಿವೆ. ವೈದ್ಯಕೀಯ, ಸಾಹಿತ್ಯ, ಮಹಿಳಾ ಸಬಲೀಕರಣ, ಮತ್ತು ಸಾಮಾಜಿಕ ಸೇವೆಗಳಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ.



ಬಾವಿಹಳ್ಳಿ ನಾಗನಗೌಡ:

ಗಣಿನಾಡಿನ ಪ್ರಸಿದ್ದ ಉದ್ಯಮಿಯಾಗಿರುವ ಇವರು, ಬಿಕೆಜಿ ಫೌಂಡೇಶನ್ ಮೂಲಕ ಶಿಕ್ಷಣ ಅಭಿವೃದ್ಧಿ, ಸಾಮಾಜಿಕ ಸೇವೆ ಮತ್ತು ಸಾಹಿತ್ಯ-ಸಾಂಸ್ಕೃತಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರಗಳ ಮೂಲಕ ಕ್ಷಯರೋಗಿಗಳ ಚಿಕಿತ್ಸೆಗೆ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ಸಮುದಾಯಕ್ಕೆ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ, ಮೂಲಭೂತ ಸೌಕರ್ಯಗಳ ಕಲ್ಪಿಸಲು ಕೊಡುಗೆ ನೀಡಿದ್ದಾರೆ. ಇವರ ಕಾರ್ಯಗಳಿಗೆ ಕನ್ನಡ ಶ್ರೀ ಮತ್ತು ಸೇವಾರತ್ನ ಪ್ರಶಸ್ತಿಗಳು ಒಲಿದು ಬಂದಿವೆ. ತಾಲ್ಲೂಕು ಕನ್ನಡ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಘಟಿಕೋತ್ಸವದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಲಸಚಿವ ನಾಗರಾಜು.ಸಿ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST