ಬಳ್ಳಾರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಸ್ಥಳೀಯ ನಾಯಕರು ಇಲ್ಲಿ ಪುತ್ಥಳಿ ಆಗಬೇಕು ಎಂದು ಕೈಗೊಂಡಿರುವ ತೀರ್ಮಾನ ಸರಿಯಾಗಿದೆ. ಡಿ.೨೪ ರಿಂದ ಡಿ.೨೯ ರವರೆಗೆ ಈ ಜಿಲ್ಲೆಯ ಜನ ಬಹಳ ಸಂಭ್ರಮದಿಂದ ಪುತ್ಥಳಿ ಸ್ವಾಗತ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಿದ್ದರು. ಈಗ ಕೇವಲ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದಿದೆ. ಜ.೧ ರಂದು ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಕಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಕಡೆ ಬ್ಯಾನರ್ ಕಟ್ಟುತ್ತಾರೆ. ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಅವರಿಗೆ ಅಸಮಾಧಾನವಿದ್ದಿದ್ದರೆ, ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಶಾಸಕರು, ಇತರೆ ನಾಯಕರಿಗೆ ಕರೆ ಮಾಡಿ, ನಮಗೆ ವಾಲ್ಮೀಕಿ ಅವರ ಬ್ಯಾನರ್ ನೋಡಿದರೆ ಆಗುವುದಿಲ್ಲ, ಈ ಜನಾಂಗ ನಮಗೆ ಮೋಸ ಮಾಡಿದೆ. ಕೇವಲ ಕಾಂಗ್ರೆಸ್ ನವರನ್ನು ಗೆಲ್ಲಿಸಿದ್ದಾರೆ. ಬ್ಯಾನರ್ ತೆಗೆಯಿರಿ ಎಂದಿದ್ದರೆ ಅವರು ತೆರವು ಮಾಡುತ್ತಿದ್ದರು. ಆದರೆ ಅವರು ಯಾರಿಗೂ ಸೂಚನೆ ನೀಡಿಲ್ಲ. ಬದಲಿಗೆ ವಾಲ್ಮೀಕಿ ಅವರಿಗೆ ಅಪಮಾನವಾಗುವ ರೀತಿ ಬ್ಯಾನರ್ ತೆರವುಗೊಳಿಸಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತೆ ಬ್ಯಾನರ್ ಹಾಕಲು ಹೋಗಿದ್ದಾರೆ. ನಂತರದ ಘಟನೆಗಳನ್ನು ನಾನು ನೋಡಿದ್ದೇನೆ. ಅವರ ಮುಖಂಡತ್ವದಲ್ಲೇ ಬ್ಯಾನರ್ ಹರಿದುಹಾಕಿದ್ದಾರೆ. ಇದು ಸರಿಯೋ ತಪ್ಪೋ ಎಂದು ನಾನು ತೀರ್ಮಾನ ಮಾಡುವುದಿಲ್ಲ, ನೀವುಗಳೇ ತೀರ್ಮಾನ ಮಾಡಿ” ಎಂದರು.
“ನಾನು ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಲು ಇಲ್ಲಿಗೆ ಬಂದಿಲ್ಲ. ಕಾನೂನು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಬಹಳ ದಿಟ್ಟವಾಗಿ ಅಗತ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆ ಸರಿ ಎಂದು ನಾನು ಹೇಳುವುದಿಲ್ಲ. ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ, ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಝಡ್ ಕೆಟಗರಿ ಭದ್ರತೆ ಪಡೆಯಲಿ:
“ಶಾಸಕರು ಹಾಗೂ ಸಂಸದರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಜನಾರ್ದನ ರೆಡ್ಡಿ ದಂಪತಿಗೆ ಐವರು ಭದ್ರತಾ ಸಿಬ್ಬಂದಿ ನೀಡಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು, ಕೊಪ್ಪಳದಲ್ಲಿ ಒಬ್ಬರು, ಅವರ ಧರ್ಮಪತ್ನಿಗೆ ಒಬ್ಬರು, ಸೋಮಶೇಖರ್ ಅವರಿಗೆ ಒಬ್ಬರು, ಶ್ರೀರಾಮುಲು ಅವರಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ನಿಯೋಜಿಸಲಾಗಿದ್ದು, ಈ ಭದ್ರತಾ ಸಿಬ್ಬಂದಿ ಅವರ ಜತೆಯಲ್ಲೇ ಇದ್ದಾರೆ. ಜನಾರ್ದನ ರೆಡ್ಡಿ ಅವರು ತಮ್ಮನ್ನು ಕೊಲ್ಲುವ ಸಂಚು ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಅವರು ದೂರು ನೀಡಿದ್ದಾರಾ ಎಂದು ಕೇಳಿದೆ. ಯಾವುದೇ ದೂರು ನೀಡಿಲ್ಲ ಎಂಬ ವಿಚಾರ ತಿಳಿಯಿತು. ಜನಾರ್ದನ ರೆಡ್ಡಿ ಅವರಿಗೆ ದೂರು ನೀಡಲು ಸಾಧ್ಯವಾಗದಿದ್ದರೆ, ಅವರ ಗನ್ ಮ್ಯಾನ್ ಗಳು ದೂರು ನೀಡಲು ಅವಕಾಶವಿದೆ. ಅವರು ಝಡ್ ಕೆಟಗೆರಿ ಭದ್ರತೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಭದ್ರತೆಯನ್ನು ಯಾರು ನೀಡಬೇಕು ಎಂದು ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಈ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ತಿಳಿಯಿತು. ಝಡ್ ಕೆಟಗರಿ ಭದ್ರತೆ ಬೇಕಾಗಿರುವವರು ಕೇಂದ್ರ ಸರ್ಕಾರದಿಂದ ತೆಗೆದುಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ’ ಎಂದು ತಿರುಗೇಟು ನೀಡಿದರು.

ಬಳ್ಳಾರಿ ಇತಿಹಾಸಕ್ಕೆ ಧಕ್ಕೆ ಬರುವಂತೆ ವರ್ತಿಸಬೇಡಿ:
“ಈ ಅಹಿತಕರ ಘಟನೆ ಆಗಬಾರದಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಬಳ್ಳಾರಿ ಇತಿಹಾಸ ದೊಡ್ಡದಿದೆ. ದಯವಿಟ್ಟು ಇದರ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ. ನಾನು ನಮ್ಮವರಿಗೆ ಬುದ್ಧಿವಾದ ಹೇಳಿದ್ದು, ಮುಂದೆಯೂ ಹೇಳುತ್ತೇನೆ. ಬಿಜೆಪಿಯವರಿಗೆ ಅವರ ನಾಯಕರು ಬಹಳ ದೊಡ್ಡವರಿದ್ದಾರೆ, ಅವರಿಗೆ ಬಿಡುತ್ತೇನೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಜಡ್.ಜಮೀರ್ ಅಹಮ್ಮದ್, ಸಂಸದ ಇ.ತುಕಾರಾಂ, ಶಾಸಕರಾದ ನಾರಾಭರತ್‌ರೆಡ್ಡಿ, ಬಿ.ನಾಗೇಂದ್ರ, ಜೆ,ಎನ್.ಗಣೇಶ್, ಬಿ.ಎಂ.ನಾಗರಾಜ್, ಎನ್.ವೈ.ಗೋಪಾಲಕೃಷ್ಣ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯುಲು, ಮೇಯರ್ ಗಾದೆಪ್ಪ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ ಸೇರಿದಂತೆ ಇನ್ನಿತರೆ ಕಾಂಗ್ರೆಸ್ ಮುಖಂಡರು, ವಾಲ್ಮೀಕಿ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಘಟನೆಯಲ್ಲಿ ನಮ್ಮ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರು ಮೃತಪಟ್ಟಿರುವುದು ಅತ್ಯಂತ ದುಖಃ ತರಿಸಿದೆ. ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ, ಪಕ್ಷವಿದೆ, ಧೈರ್ಯದಿಂದಿರಿ ಎಂದು ಕುಟುಂಬದ ಸದಸ್ಯರಿಗೆ ಅಭಯ ನೀಡಿದರು.

ಈ ವೇಳೆ ಕುಟುಂಬದ ಸದಸ್ಯರು, ಮೃತ ಪತ್ನಿ ದುಃಖವನ್ನು ತೋಡಿಕೊಂಡರು. ರಾಜಶೇಖರ್ ತಾಯಿ ಅವರು ಕಿರಿಯ ಪುತ್ರನಿಗೆ ನೌಕರಿ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಸರ್, ಜೊತೆಗೆ ವಾಸಿಸಲು ಮನೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು. ನಿಮ್ಮ ಜೊತೆ ನಾವಿದ್ದೇವೆ ಚಿಂತೆ ಬೇಡ ಎಂದರು.