ಮೊಳಕಾಲ್ಮೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಕುರಿತು ಬಳಸಿರುವ ಪದಗಳಿಗೆ ಬಿಜೆಪಿ ಮುಖಂಡರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರಭಾಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೀರ್ಘ ರಾಜಕೀಯ ಅನುಭವ ಹೊಂದಿರುವ ಹಿರಿಯ ಮುತ್ಸದ್ದಿ ರಾಜಕಾರಣಿ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ಮುತ್ಸದ್ದಿ ರಾಜಕಾರಣಿಗಳ ನಡೆ-ನುಡಿಗಳಿಂದ ಕಿರಿಯ ಕಾರ್ಯಕರ್ತರು ಕಲಿಯಬೇಕಾದದ್ದು ಬಹಳಷ್ಟಿದೆ. ಅಂತಹ ಹಿರಿಯ ನಾಯಕರು ಬಳಸಿದ ಪದಗಳ ಬಗ್ಗೆ ನನ್ನಂತಹ ಒಬ್ಬ ಸಣ್ಣ ಕಾರ್ಯಕರ್ತ ಪ್ರಶ್ನೆ ಮಾಡುವ ಸನ್ನಿವೇಶ ಬಂದಿರುವುದು ಅತ್ಯಂತ ವಿಪರ್ಯಾಸ ಮತ್ತು ನೋವಿನ ಸಂಗತಿ” ಎಂದು ಪ್ರಭಾಕರ್ ಭಾವನಾತ್ಮಕವಾಗಿ ನುಡಿದಿದ್ದಾರೆ
ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾದರೂ, ವೈಯಕ್ತಿಕ ವಿಚಾರಗಳನ್ನು ರಾಜಕೀಯಕ್ಕೆ ಎಳೆದು ತರುವುದು ಯಾವ ರೀತಿಯ ರಾಜಕೀಯ ಸಂಸ್ಕೃತಿ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೆಂದು ಹೆಮ್ಮೆಪಡುವಾಗ, ಅದರ ರಾಷ್ಟ್ರೀಯ ಅಧ್ಯಕ್ಷರ ಮಾತುಗಳಲ್ಲಿಯೂ ಘನತೆ, ಸಂಯಮ ಮತ್ತು ಜವಾಬ್ದಾರಿ ಇರಬೇಕಲ್ಲವೇ? ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿ ಇದೇನಾ? ರಾಜಕೀಯ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ಭಾಷೆಯಲ್ಲಿನ ಜವಾಬ್ದಾರಿಯನ್ನೇ ಮರೆತಿದೆಯೇ ಎಂದು ಪ್ರಭಾಕರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ತಮ್ಮ ಪದಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ರಾಜಕೀಯ ಟೀಕೆಗಳು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿಯಬಾರದು. ರಾಜಕೀಯ ನಾಯಕರು ಬಳಸುವ ಮಾತುಗಳು ಅವರ ವ್ಯಕ್ತಿತ್ವ ಹಾಗೂ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ಈ ಹೇಳಿಕೆಯ ನೈತಿಕ ಹೊಣೆ ಹೊತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಪ್ರಭಾಕರ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.