ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಒ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಭಾಳ್, "ನಮ್ಮ ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿತೋರಿಸುತ್ತಾ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ೨ ವರ್ಷ ೪ ತಿಂಗಳು ಕಳೆದರೂ ಸಹ ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನತೆ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ೨೦೨೫-೨೬ ನೇ ಸಾಲಿಗೆ ರಾಜ್ಯದ ೪೩ ಇಲಾಖೆಗಳಲ್ಲಿ ೨,೮೪,೮೮೧ ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ. ಕೆಲವು ಕುಂಟುನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದೆಂದು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ೪-೫ ವರ್ಷಗಳಿಂದ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆಹೋಗುತ್ತಿದ್ದಾರೆ. ಇನ್ನೊಂದೆಡೆ ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ೫೯,೪೫೪ ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ ೬ ಜಿಲ್ಲೆಗಳಲ್ಲಿ ೨೧,೩೮೧ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದರು.

ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕರಾದ ಜಗದೀಶ್ ನೇಮಕಲ್ ಅವರು ಮಾತನಾಡುತ್ತಾ , ಕಳೆದ ಹಲವಾರು ವರ್ಷಗಳಿಂದಲೂ ನೇಮಕಾತಿ ಇಲ್ಲದಿದ್ದರೂ ಜಾತಕ ಪಕ್ಷಿಯಂತೆ ನೇಮಕಾತಿಗಾಗಿ ಕಾಯುತ್ತಾ, ಸಾವಿರಾರು ರೂಪಾಯಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹಾಗೂ ೨೪೭ ಗ್ರಂಥಾಲಯಗಳಲ್ಲಿ ಓದಲು ಉದ್ಯೋಗಾಕಾಂಕ್ಷಿಗಳು ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿ-ನಾಲಿ ಮಾಡಿ, ಸಾಲ ಮಾಡಿ ಪೋಷಕರು ಮಕ್ಕಳಿಗೆ ಕೋಚಿಂಗ್ ಕೊಡಿಸುತ್ತಿದ್ದಾರೆ. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದರೂ ಸಹ ಸರ್ಕಾರಗಳು ಈ ಬಗ್ಗೆ ಮಾನವೀಯವಾಗಿ ವರ್ತಿಸುತ್ತಿಲ್ಲ. ಈಗಲಾದರೂ ಸರ್ಕಾರಗಳು ಯಾವುದೇ ನೆಪಗಳನ್ನು ಹೇಳದೆ, ಕೆಲವೇ ಸಾವಿರ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಗಟ್ಟಿ, ಪಾರದರ್ಶಕತೆಯನ್ನು ತರುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಾಲೈದು ವರ್ಷಗಳಿಂದ ನೇಮಕಾತಿಗಳು ನಡೆಯದ ಕಾರಣ ಅರ್ಹತಾ ವಯೋಮಿತಿಯಲ್ಲಿಯೂ ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿಗೆ ಕೆ.ಇ.ಎ. ಮೂಲಕ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ದುಬಾರಿ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅದನ್ನು ಕೂಡಲೇ ಕೈಬಿಡಬೇಕು. ಈ ಕೆಳಗಿನ ಹಕ್ಕೋತ್ತಾಯಗಳನ್ನು ಯಾವುದೇ ವಿಳಂಬವಿಲ್ಲದೆ ಪರಿಹರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ನಿರೂಪಣೆಯನ್ನು ಪ್ರಮೋದ್ ಅವರು ನಡೆಸಿಕೊಟ್ಟರು. ಸಹ ಸಂಚಾಲಕರಾದ ಪುರುಷೋತ್ತಮ, ಆಂಜನೇಯ ಸದಸ್ಯರಾದ ಸುಜಾತ ನವಲಗುಂದ, ಸುರೇಶ್. ಎನ್, ಗೋಪಾಲ್, ಮೋಹನ್, ನಾಗರಾಜ್ .ಎನ್, ಮಂಜುನಾಥ.ಟಿ, ಶಿವಶಂಕರ್ ಹಾಗೂ ನೂರಾರು ಯುವಜನರು ಭಾಗವಹಿಸಿದ್ದರು.