ಪುರುಷ ಮತ್ತು ಮಹಿಳಾ ತಂಡಗಳು ಈ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದ್ದು ಕರ್ನಾಟಕ ಅಂದು, ಇಂದು ಮತ್ತು ಮುಂದೆಯೂ ತನ್ನ ಕೌಶಲ್ಯವನ್ನು ಕ್ರೋಢೀಕರಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ ಎನ್ನುವುದನ್ನು ತೆಲುಗು ನೆಲದಲ್ಲಿ ಸಾಬೀತು ಪಡಿಸಿವೆ.
ಟೂರ್ನಿಯುದ್ಧಕ್ಕೂ ಪುರುಷರ ತಂಡವು ಅದ್ಭುತ ಶ್ರದ್ಧೆ, ವೇಗ ಮತ್ತು ತಂಡಸ್ಪೂರ್ತಿಯನ್ನು ವ್ಯಕ್ತಪಡಿಸಿ, ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಬಲಿಷ್ಠ ಪ್ರತಿಸ್ಪರ್ಧಿಗಳನ್ನು ಸೋಲಿತು. ಅಂತಿಮ ಪಂದ್ಯದಲ್ಲಿ ರೋಮಾಂಚನಗೊಳಿಸಿದ ತಂಡವು ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿತು.
ಕನ್ನಡದ ಮಹಿಳಾ ತಂಡವೂ ತಾವೇನೂ ಕಡಿಮೆ ಇಲ್ಲವೆನ್ನುವಂತೆ ಅಮೋಘ ಸಾಮರ್ಥ್ಯವನ್ನು ಪ್ರದರ್ಶಿಸಿತು. `ಮಹಿಳೆಯರೇ ಸ್ಟ್ರಾಂಗು ಗುರು' ಎನ್ನುವುದನ್ನು ನಿರೂಪಿಸಿ ಅಂತಿಮ ಹಂತ ತಲುಪಿತು. ಆ ಕ್ಷಣವೇ ರನ್ನರ್-ಅಪ್ ಸ್ಥಾನ ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು.

ಕರ್ನಾಟಕ ಫ್ಲ್ಯಾಗ್ ಫುಟ್ಬಾಲ್ ಅಸೋಸಿಯೇಷನ್ (ಕೆಎಫ್‌ಎಎಫ್‌ಎ) ಅಧಿಕಾರಿಗಳು ಈ ತಂಡಗಳ ಸಾಹಸಕ್ಕೆ ಹರ್ಷ ವ್ಯಕ್ತಪಡಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಅಮೇರಿಕನ್ ಫ್ಲ್ಯಾಗ್ ಫುಟ್ಬಾಲ್ ಇಂಡಿಯಾ (ಎಎಫ್‌ಎಫ್‌ಐ) ಆಯೋಜಿಸಿದ್ದ ಈ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟçದ ನಾನಾ ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಈ ಕ್ರೀಡೆ ದಿನದಿಂದ ದಿನಕ್ಕೆ ವೃದ್ಧಿಸುತ್ತ ಜನಪ್ರಿಯತೆಯನ್ನು ಪಡೆಯುತ್ತಿದೆ ಎನ್ನುವುದನ್ನು ಸಾಕ್ಷೀಕರಿಸಿತು.
ಈ ವಿಜಯೋತ್ಸಾಹದ ಸಂಭ್ರಮದಲ್ಲಿ ಭಾರತ ಫ್ಲ್ಯಾಗ್ ಫುಟ್ಬಾಲ್‌ನ ಶಕ್ತಿ ಕೇಂದ್ರವೆಂದು ಕರ್ನಾಟಕ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ದೃಢಪಡಿಸಿತು. ಈ ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಲು ಅನೇಕ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೇರಣೆ ನೀಡಿತು.