LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ಅಗತ್ಯ

 

ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸಹಭಾಗಿತ್ವದಲ್ಲಿ 1991 ರಿಂದ  ಆಯೋಜಿಸಲಾಗುತ್ತಿದೆ.

 

ಸ್ತನ್ಯಪಾನದ ಮಹತ್ವ, ಆರೋಗ್ಯ, ಭಾವನಾತ್ಮಕ ಮತ್ತು ಬೆಳವಣಿಗೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ, ತಾಯಂದಿರು ಯಶಸ್ವಿಯಾಗಿ ಸ್ತನ್ಯಪಾನ ಮಾಡಿಸಲು ಸಹಾಯ ಮಾಡುವುದಕ್ಕೆ ಈ ಅಭಿಯಾನ ಕರೆ ನೀಡುತ್ತದೆ.



ಮಗುವಿನ ಬದುಕುಳಿಯುವಿಕೆ, ಪೋಷಣೆ, ರೋಗ ನಿರೋಧಕ ಶಕ್ತಿಯ ಬೆಳವಣಿಗೆಗೆ ಸ್ತನ್ಯಪಾನ ಅಗತ್ಯ. ಇದು ತಾಯಿ ಮತ್ತು ಮಗುವಿನ  ಬಾಂಧವ್ಯ ಬಲಪಡಿಸುತ್ತದೆ. ತಾಯಂದಿರಿಗೆ, ಪ್ರಸವಾನಂತರದ ಚೇತರಿಕೆಗೆ ಇದು ಬೆಂಬಲಿಸುತ್ತದೆ. ಕೆಲಸದ ಸ್ಥಳಗಳು, ಸಾರ್ವಜನಿಕ ಪ್ರದೇಶಗಳಲ್ಲಿ ತಾಯಂದಿರು ಸ್ತನ್ಯಪಾನ ಮಾಡಿಸಲು ಸ್ನೇಹಮಯ ಹಾಗೂ ಸೂಕ್ತ ವ್ಯವಸ್ಥೆ ಮಾಡಬೇಕು. ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಪ್ರೋತ್ಸಾಹ ಮತ್ತು ಅದಕ್ಕೆ ಅವಶ್ಯಕವಾದ ಸಹಾಯ ಮಾಡಬೇಕು. ಪ್ರತಿ ಮಗುವಿಗೆ ಆರೋಗ್ಯಕರ ಆರಂಭಕ್ಕೆ ಸ್ತನ್ಯಪಾನ ಅತ್ಯಗತ್ಯ.

 

ತಾಯಿಯ ಹಾಲಿನ ಮಹತ್ವ

 

ತಾಯಿಯ ಎದೆಹಾಲು ಮಗುವಿಗೆ ಅತ್ಯಂತ ಅವಶ್ಯಕ ಪೋಷಕಾಂಶಗಳನ್ನು ನೀಡುವ ಪ್ರಾಕೃತಿಕ ಆಹಾರ. ಇದು ಪ್ರತಿರಕ್ಷಕ ಶಕ್ತಿ ಹೆಚ್ಚಿಸುವುದಲ್ಲದೇ, ಸೋಂಕುಗಳಿಂದ ಶಿಶುವನ್ನು ರಕ್ಷಿಸುತ್ತದೆ. ಶಿಶುವಿನ ಬೆಳವಣಿಗೆಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಎದೆ ಹಾಲನ್ನು ಸಾಮಾನ್ಯ ಹೆರಿಗೆಯಾದ 30 ನಿಮಿಷಗಳೊಳಗೆ ಮತ್ತು ಸಿಸೇರಿಯನ್ ಹರಿಗೆಯಾದ ಒಂದು ಗಂಟೆಯೊಳಗೆ ಕುಡಿಸುವುದು ಉತ್ತಮ.



ತಾಯಿಯ ಮೊದಲ ಹಾಲಾದ ಕೊಲೋಸ್ಟ್ರೊಮ್ನುಲ್ಲಿ ತಾಯಿಯ ಪ್ರತಿಕಾಯಗಳಿದ್ದು, ಮಗುವಿನ ಪ್ರತಿರಕ್ಷಣಾ ಮತ್ತು ವ್ಯಾದಿ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಮಗುವಿನ ಮಲ, ಮೂತ್ರ ವಿಸರ್ಜನೆ ಸರಾಗವಾಗುವಂತೆ ಮಾಡಿ, ಆರಂಭಿಕ ದಿನಗಳಲ್ಲಿ ಕಾಮಾಲೆ ಹರಡದಂತೆ ಕಾಪಾಡುವುದಲ್ಲದೇ, ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾಂತಿ, ಅಲರ್ಜಿ ಮತ್ತು ಸೋಂಕುಗಳು ತಗಲುವ ಅಪಾಯವನ್ನು ಕಡಿಮೆ ಮಾಡುತ್ತದೆ.

 

ಸ್ತನ್ಯಪಾನದಿಂದ ತಾಯಿಗೆ ಹಲವು ಲಾಭಗಳಿವೆ. ಹಾಲು ಉತ್ಪತ್ತಿ ಹೆಚ್ಚುವ, ಗರ್ಭಕೋಶ ರಕ್ತಸ್ರಾವ ತಡೆ, ಸ್ತನ ಮತ್ತು ಗರ್ಭಕೋಶದ ಅರ್ಬುದ ರೋಗ ಅಪಾಯ ತಗ್ಗಿಸುವ ಮತ್ತು ಇದೊಂದು ನೈಸರ್ಗಿಕ ಗರ್ಭ ನಿರೋಧಕವಾಗಿದೆ.

 

ಸ್ತನ್ಯಪಾನ ಪ್ರಾರಂಭಿಸುವ  ಮುನ್ನ ಮೊದಲಿಗೆ ತಾಯಿ ಮತ್ತು ಮಗುವಿನ ಬಾಂಧವ್ಯಕ್ಕೆ ಸಿದ್ಧತೆ ಮಾಡಬೇಕು. ನಂತರ ಕಾಂಗರೂ ರೀತಿ ತಾಯಿಯ ಆರೈಕೆ ಮಾಡಬೇಕು. ಎದೆ ಹಾಲಣಿಸುವಾಗ ಸ್ಥಿತಿಯ ಬಗ್ಗೆ ಗಮನಹರಿಸಬೇಕು, ಯಾಕೆಂದರೆ ಇದು ಮಗುವಿಗೆ ಎಷ್ಟು ಹಾಲು ದೊರೆಯುತ್ತದೆ ಎನ್ನುವುದನ್ನು ತೀರ್ಮಾನಿಸುತ್ತದೆ.



ಸ್ತನ್ಯಪಾನ ಮಾಡಿಸಲು ಹಲವು ವಿಧಾನಗಳಿದ್ದು, ಅವುಗಳಲ್ಲಿ ತೊಟ್ಟಿಲಿನ ಸ್ಥಿತಿ, ಅಡ್ಡ ತೊಟ್ಟಿಲಿನ ಸ್ಥಿತಿ, ಫುಟ್ಬಾಟಲ್ ಸ್ಥಿತಿ ಹಾಗು ಅವಳಿ ಫುಟ್ಬಾ್ಲ್ ಸ್ಥಿತಿಗಳು ಪ್ರಮುಖ ಸ್ಥಿತಿಗಳಾಗಿವೆ. ಆರಂಭಿಕ ದಿನಗಳಲ್ಲಿ ಮಗುವಿಗೆ ಕುಡಿಸಲು ಸಾಕಷ್ಟು ಎದೆಹಾಲು ಇರುವುದಿಲ್ಲ ಮೊದಲೆರಡು ದಿನಗಳಲ್ಲಿ ತಾಯಿಯ ಸ್ತನಗಳಲ್ಲಿ ಕಡಿಮೆ ಪ್ರಮಾಣದಲ್ಲಿರುವ ಕೇವಲ ಬಿಳಿ ಹಳದಿ ಮಿಶ್ರಿತ ಕೊಲೊಸ್ಟ್ರೊಮ್ ಮಾತ್ರ ಉತ್ಪತ್ತಿಯಾಗುತ್ತದೆ. ಆದ್ದರಿಂದ ಮಗುವಿಗೆ ಹೆಚ್ಚುಬಾರಿ ಎದೆಹಾಲು ಕುಡಿಸಬೇಕಾಗುತ್ತದೆ. ಸಾಕಷ್ಟು ಹಾಲು ಉತ್ಪತ್ತಿಯಾಗಲು ಸುಮಾರು 3 ರಿಂದ 5 ದಿನಗಳು ಬೇಕಾಗುತ್ತದೆ.

 

ಎದೆಹಾಲು ಉತ್ಪಾದನೆಗೆ ಯಥೇಚ್ಚವಾಗಿ ಸುಮಾರು 2.5 ಲೀಟರ್ ನಿಂದ 3 ಲೀಟರ್‍ ನಷ್ಟು ಹೆಚ್ಚಿನ ದ್ರವ ಪದಾರ್ಥಗಳು ಮತ್ತು ಪೌಷ್ಠಿಕ ಆಹಾರ ಸೇವಿಸುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ. ಸಾಕಷ್ಟು ನಿದ್ದೆ ಮತ್ತು ವಿಶ್ರಾಂತಿ, ಸಕಾರಾತ್ಮಕವಾಗಿ ಯೋಚಿಸುವುದರಿಂದ ಎದೆ ಹಾಲಿನ ಉತ್ಪಾದನೆ ಹೆಚ್ಚಳವಾಗುತ್ತದೆ.

 

ಮಗುವಿಗೆ ಪೂರ್ತಿ ಆಹಾರ ಸಿಗಲು ಪ್ರತಿ ಸ್ತನದಲ್ಲೂ ಒಮ್ಮೆಗೆ ಸುಮಾರು 20 ರಿಂದ 30 ನಿಮಿಷಗಳ ಕಾಲ ಕುಡಿಸಿ, ನಂತರ ಸ್ತನ ಬದಲಾಯಿಸುತ್ತಾ ಮತ್ತೆ ಕೊಡಬೇಕು. ಪ್ರಾರಂಭದಲ್ಲಿ ನೀರಿನ ರೀತಿ ಇದ್ದು, ನಂತರ ಪೌಷ್ಠಿಕವಾದ ಹಾಲು ದೊರೆಯುತ್ತದೆ. ಇದರಿಂದ ಮಗುವಿನ ಹಸಿವು ನೀಗುವುದಲ್ಲದೇ ಉತ್ತಮ ಬೆಳವಣಿಗೆ ಉಂಟಾಗುತ್ತದೆ.

 

ಮಗುವಿಗೆ ಹಸಿವಾಗಾಗ ಅದು ತನ್ನ ಬಾಯಿಯ ಚಲನೆಯಿಂದ ಅಥವಾ ಅಳುವುದರಿಂದ ಹಾಗೆಯೇ ತನ್ನ ಕೈಗಳನ್ನು ಬಾಯಿಯ ಹತ್ತಿರ ತರುವುದರಿಂದ ತನ್ನ ಹಸಿವನ್ನು ವ್ಯಕ್ತಪಡಿಸುತ್ತದೆ. ಮೈ ಮುರಿಯುವುದು, ದೇಹದ ಚಲನೆ, ಬಾಯಿಯಲ್ಲಿ ಕೈ ಜಾಸ್ತಿ ಹಾಕುವುದು, ತೂರುವುದು ಇವೆಲ್ಲವೂ ಮಧ್ಯಂತರ ಸೂಚನೆಗಳಾಗಿದ್ದು, ಅಳುವುದು, ಚಲನೆಯಲ್ಲಿ ತಳಮಳ, ದೇಹದ ಬಣ್ಣ ಕೆಂಪಾಗುವಿಕೆ ಇವೆಲ್ಲವು ತಡವಾದ ಸೂಚನೆಗಳಾಗಿವೆ. ತಡವಾಗಿ ಮಗು ತನ್ನ ಹಸಿವನ್ನು ಸೂಚಿಸಿದ್ದಲ್ಲಿ, ಮಗುವನ್ನು ಸಮಾಧಾನ ಮಾಡಿ ನಂತರ ಸ್ತನ್ಯಪಾನವನ್ನು ಸಮರ್ಪಕ ಜೋಡಣೆಯಿಂದ ಮಾಡಬೇಕಾಗುತ್ತದೆ. ಅಸಮರ್ಪಕ ಜೋಡಣೆಯಿಂದ ಮೊಲೆತೊಟ್ಟು ಬಿರುಕು ಬಿಡಬಹುದು ಅಥವಾ ನೋವು ಉಂಟಾಗಬಹುದು. ಮೃದುವಾದ ಬಿರುಕುಗಳು ಇದ್ದರೆ ಮಗುವಿಗೆ ಹಾಲು ಕುಡಿಸಬಹುದು, ಆದರೆ ತೀವ್ರತರವಾದ ಬಿರುಕುಗಳಿದ್ದರೆ ಮಗುವನ್ನು ಸ್ತನದಿಂದ ತಾತ್ಕಾಲಿಕವಾಗಿ ಬೇರ್ಪಡಿಸಿ ಮೊಲೆತೊಟ್ಟು ವಾಸಿಯಾಗಲು ಅನುಕೂಲ ಮಾಡಿಕೊಡಬೇಕು.



ಎದೆಹಾಲು ಕುಡಿಸಿದ ನಂತರ ಬರುವಂತಹ ಗಟ್ಟಿಯಾದ ಹಾಲನ್ನು ಬಿರುಕು ಬಿಟ್ಟ ಜಾಗಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.  ಸ್ತನದಲ್ಲಿ ಹಾಲು 3 ರಿಂದ 4 ಗಂಟೆಯ ನಂತರ ಇರಲು ಬಿಡಬಾರದು, ಕೈಯಿಂದ ತೆಗೆದು ಶೇಖರಿಸಬೇಕು, ಶೇಖರಿಸಿದ ಎದೆ ಹಾಲನ್ನು ಮಗುವಿಗೆ ಒಳಲೆಯಲ್ಲಿ ಕುಡಿಸಿ ನಂತರ ಮೊದಲಿನಂತೆ ಸ್ತನದಿಂದ ಕುಡಿಸಬೇಕು. ಆಗಲೂ ಗುಣವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 

ಹಾಲು ಕುಡಿದ ನಂತರ ಮಗುವಿಗೆ ತೇಗಿಸಬೇಕು. ತೇಗಿಸುವುದು ಅಂದರೆ ಮಗುವಿನ ಹೊಟ್ಟೆಯಲ್ಲಿ ಇರುವ ಗಾಳಿಯನ್ನು ಅದರ ಬೆನ್ನಿನ ಮೇಲೆ ಮೃದುವಾಗಿ ತಟ್ಟುವುದರ ಮೂಲಕ ಹೊರತೆಗೆಯಬೇಕಾಗುತ್ತದೆ. ಪ್ರತಿಬಾರಿ ಮೊಲೆಯುಣಿಸಿದ ನಂತರ ಬೀರ್ಣಿಸುವ ಪ್ರಕ್ರಿಯೆ ಮಾಡಬೇಕು. ಜೀರ್ಣಿಸಿದ ನಂತರ ವಾಂತಿಯಾಗುವುದನ್ನು ತಡೆಯಲು ಮಗುವನ್ನು ಒಂದು ಬದಿಯಲ್ಲಿ ಮಲಗಿಸಬೇಕು.

 

ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಹಾಲು ದೊರೆಯತ್ತಿದ್ದಲ್ಲಿ,  ಪ್ರತಿದಿನ 6 ರಿಂದ 8 ಬಾರಿ ಲಘುವಾಗಿ ಮೂತ್ರ ವಿಸರ್ಜನೆ ಅಥವಾ 3 ರಿಂದ 5 ಬಾರಿ ಜಾಸ್ತಿ ಮೂತ್ರ ವಿಸರ್ಜನೆ ಮಾಡಬಹುದು. ಮಗು ಚುರುಕಾಗಿರುವುದಲ್ಲದೆ ಸಕ್ರಿಯ ಮತ್ತು ಖುಷಿಯಾಗಿರುವುದನ್ನು ಕಾಣಬಹುದು. ಹಾಗಯೇ ಮಗು ತನ್ನ ಜನನ ತೂಕವನ್ನು ಸುಮಾರು 10 ದಿನಗಳಲ್ಲಿ ಹೆಚ್ಚಿಸುವುದನ್ನು ಕಾಣಬಹುದು.



ಮಗು ಹಾಲು ಕುಡಿಯುವುದನ್ನು ನಿರಾಕರಿಸಿದಾಗ ವಾಂತಿ, ಬೇಧಿಯಾದಾಗ, ಜ್ವರ, ಉಸಿರಾಡಲು ಕಷ್ಟಪಡುವಾಗ, ವಿಪರೀತ ಅಳು ಅಥವಾ ದೇಹದ ಬಣ್ಣದಲ್ಲಿ ಬದಲಾವಣೆ ಅಂದರೆ ಬಿಳಿಚಿಕೊಳ್ಳುವುದು ಆದರೆ ಕೂಡಲೇ ವೈದ್ಯರ ಬಳಿ ಕರೆದುದೊಯ್ಯಬೇಕು.

 

ಸ್ತನ್ಯಪಾನ ಮಗುವಿಗೆ ಮೊದಲ ಲಸಿಕೆಯಂತೆ. ಇದು ಪರಿಪೂರ್ಣ ಪೋಷಕಾಂಶವಾಗಿದೆ.  ಸತತವಾಗಿ ಎರಡು ವರ್ಷಗಳ ಕಾಲ ಸ್ತನ್ಯಪಾನ ಮಾಡುವುದರಿಂದ ಜೀವನ ಶೈಲಿಯ ರೋಗಗಳನ್ನು ತಡೆಗಟ್ಟ ಬಹುದು.  ಸ್ತನ್ಯಪಾನವನ್ನು ಪ್ರೋತ್ಸಾಹಿಸಿ ಮತ್ತು ಅದರ ಮಹತ್ವಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ.



ಡಾ. ಆರ್ ಸೋಮಶೇಖರ್

ಹಿರಿಯ ಪ್ರಾಧ್ಯಾಪಕರು

ಮಕ್ಕಳ ಚಿಕಿತ್ಸಾ ವಿಭಾಗ,

ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST