LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಳಮೀಸಲಾತಿ 16ರಂದು ಜಾರಿಯಾಗಲೇಬೇಕು : ಮಾಜಿ ಸಚಿವ ಆಂಜನೇಯ ಹೇಳಿಕೆ

ಚಿತ್ರದುರ್ಗ : ಪರಿಶಿಷ್ಟ ಜಾತಿ ಗುಂಪಿನಲ್ಲಿ 101 ಜಾತಿಗಳ ಮಧ್ಯೆ ಮೀಸಲಾತಿ ಪಡೆಯಲು ಅಶಕ್ತರಾದ ಮಾದಿಗ ಸಮುದಾಯ ಒಳಮೀಸಲಾತಿ ಜಾರಿ ಹೋರಾಟ ಹುಟ್ಟು ಹಾಕಿದರು. ಈಗ ಮೀಸಲಾರ್ತಿ ವರ್ಗೀಕರಣ ಆಗುತ್ತಿರುವ ವೇಳೆ ಅನಗತ್ಯ ಗೊಂದಲವನ್ನುಂಟು ಮಾಡುವ ಪ್ರಯತ್ನ ಕೆಲ ಜಾತಿಗಳಿಂದ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ.

 

ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ವೇಳೆ ವಿರೋಧಿಸಿದ್ದವರು, ನ್ಯಾ.ನಾಗಮೋಹನ್ ದಾಸ್  ಆಯೋಗ ರಚನೆ ವೇಳೆ ಅಪಸ್ವರ ಎತ್ತಲಿಲ್ಲ, ಬಳಿಕ ಜಾತಿಗಣತಿ ಸಮೀಕ್ಷೆ ವೇಳೆ ತಮ್ಮ ತಮ್ಮ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ಆದರೆ, ಈಗ ನಮ್ಮ ಜಾತಿ ಸಂಖ್ಯೆ ಕಡಿಮೆ ತೋರಿಸಲಾಗಿದ್ದು, ಮೀಸಲಾತಿ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸುತ್ತಿರುವುದು ಸಂವಿಧಾನದ ವಿರೋಧಿ ಮಾತುಗಳಾಗಿವೆ ಎಂದು ಹೇಳಿದ್ದಾರೆ.

 

ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ತೀರ್ಪು ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ ನೀಡಿದೆ. ಬಳಿಕ ರಾಜ್ಯ ಸರ್ಕಾರ ಕೋರ್ಟ್ ಆದೇಶ ಪಾಲನೆಯಲ್ಲಿ ಬಹಳ ಎಚ್ಚರಿಕೆ ಹೆಜ್ಜೆ ಹಾಕಿದೆ. ಎಲ್ಲಿಯೂ ಯಾವ ಸಮುದಾಯಕ್ಕೂ ಅನ್ಯಾಯವಾಗದ ರೀತಿ 101 ಜಾತಿ ಜನರ ಸಂಖ್ಯೆ, ಅವರ ಹಿಂದುಳಿಯುವಿಕೆ ಸೇರಿ ಎಲ್ಲ ರೀತಿ ದತ್ತಾಂಶ ಸಂಗ್ರಹ ಮಾಡಿದೆ. ಜೊತೆಗೆ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ನಾಲ್ಕು ಬಾರಿ ನೋಂದಾಣಿ ಸಮೀಕ್ಷೆ ಕಾರ್ಯ ವಿಸ್ತರಣೆ ಮಾಡಲಾಗಿತ್ತು. ಜೊತೆಗೆ ಮನೆ ಮನೆ ಭೇಟಿ, ಬ್ಲಾಕ್ ಮಟ್ಟದಲ್ಲಿ ನೋಂದಣಿ, ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಎಲ್ಲ ಹಂತಗಳು ನ್ಯಾಯಸಮ್ಮತವಾಗಿದ್ದು, 60 ದಿನಗಳ ಸಮೀಕ್ಷೆ ಬಳಿಕ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಆಗಸ್ಟ್ 4ರಂದು ಒಪ್ಪಿಸಿದೆ.



ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕೈ ಸೇರುತ್ತಿದ್ದಂತೆ ಆಗಸ್ಟ್ 7ರ ಸಚಿವ ಸಂಪುಟದಲ್ಲಿ ಮಂಡಿಸಿ, ಸ್ವಾಗತಿಸಿ, ಎಲ್ಲ ಸಚಿವರು ಅಧ್ಯಯನ ನಡೆಸಲಿಯೆಂಬ ಕಾರಣಕ್ಕೆ 1700 ಪುಟಗಳ ಪ್ರತಿಯನ್ನು ನೀಡಿದ್ದಾರೆ. ಜೊತೆಗೆ ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟ ಕರೆಯಲಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ದಿಟ್ಟ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಕೆಲ ಸಮುದಾಯದ ಬೆರಳೆಣಿಕೆ ಮಂದಿ ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಆರಂಭಿಸಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮತುಗಳಾಗಿವೆ ಎಂದು ಎಚ್ಚರಿಸಿದ್ದಾರೆ.

 

ಶೇ.15 ಮೀಸಲಾತಿ ಇದ್ದಾಗಲೂ ಸದಾಶಿವ ಆಯೋಗ ಮಾದಿಗರಿಗೆ 6, ಛಲವಾದಿ 5, ಭೊವಿ-ಲಂಬಾಣಿ-ಕೊರಚ-ಕೊರಮ 3, ಅಲೆಮಾರಿ ವರ್ಗಕ್ಕೆ 1 ಪರ್ಸೆಂಟ್ ಮೀಸಲಾತಿ ನೀಡಿತ್ತು. ಬಳಿಕ ಮಾಧುಸ್ವಾಮಿ ಆಯೋಗ ಶೇ.17ಕ್ಕೆ ಹೆಚ್ಚಿಸಿ ವರದಿ ನೀಡಿತ್ತು. ಆಗಲೂ ವಿರೋಧಿಸಿದ್ದರು.

ಈಗ ನ್ಯಾ.ನಾಗಮೋಹನ್ ದಾಸ್ ಆಯೋಗ ಹಿಂದುಳಿಯುವಿಕೆ, ನಿಖರವಾದ ಹಿಂದುಳಿಯುವಿಕೆ  ದತ್ತಾಂಶ ಕ್ರೋಢಿಕರಿಸಿ ಸಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ವರಿಗೂ ಸಮಪಾಲು, ಸಮಬಾಳು ಎಂಬ ರೀತಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಮಾದಿಗರ ಜನಸಂಖ್ಯೆ, ಹಿಂದುಳಿಯುವಿಕೆ ಪರಿಗಣಿಸಿ ಶೇ.6 ನೀಡಿದ್ದು, ವಾಸ್ತವವಾಗಿ ಕನಿಷ್ಠ ಶೇ.7ರಷ್ಟು ಮೀಸಲಾತಿ ನೀಡಬೇಕಾಗಿತ್ತು. ಆದರೂ ನಾವು ವರದಿಯನ್ನು ಸ್ವಾಗತಿಸಿದ್ದೇವೆ. ಆದರೆ, ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಸೌಲಭ್ಯ ಪಡೆದವರು, ಜನಸಂಖ್ಯೆಯಲ್ಲಿ ಮಾದಿಗರಿಗಿಂತಲೂ ಕಡಿಮೆ ಇರುವವರು ತಕರಾರು ತೆಗೆದಿರುವುದು  ಅಂಬೇಡ್ಕರ್, ಸಂವಿಧಾನದ ಆಶಯದ ವಿರುದ್ಧವಾಗಿದೆ ಎಂದು ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.



ಈಗ ಸಲ್ಲಿಸಿರುವ ವರದಿ ಪ್ರಕಾರ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ "ಇ' ಗುಂಪಿನಲ್ಲಿದ್ದು, ಇದರಲ್ಲಿ ಛಲವಾದಿಗರು-ಮಾದಿಗರು ಇದ್ದಾರೆ. ಆದ್ದರಿಂದ ಇಲ್ಲಿಯೂ ಛಲವಾದಿ ಸಮುದಾಯಕ್ಕೆ ಮೀಸಲಾತಿ ದೊರೆಯಲಿದೆ ಎಂದಿದ್ದಾರೆ. ಈ ವರದಿಯನ್ನು ಸಮಗ್ರವಾಗಿ,  ಮುಕ್ತ ಮನಸ್ಸಿನಿಂದ ಅಧ್ಯಯನ ನಡೆಸಿದರೂ ಅತ್ಯಂತ ವೈಜ್ಞಾನಿಕವಾಗಿದೆ ಎಂದಿದ್ದಾರೆ.  ರಾಷ್ಟ್ರಮಟ್ಟದಲ್ಲಿ ಅಹಿಂದ ವರ್ಗದ ಚಾಂಪಿಯನ್ ಎಂದೇ ಜನಪ್ರಿಯತೆ ಗಳಿಸಿರುವ ಸಿದ್ದರಾಮಯ್ಯ ಅವರು, ಯಾವುದೇ ಒತ್ತಡ, ತಂತ್ರ, ಷಡ್ಯಂತ್ರಗಳಿಗೆ ಮನ್ನಣೆ ನೀಡದೆ ಆಗಸ್ಟ್ 16ರಂದು ಎಸ್ಸಿಯಲ್ಲಿನ 101 ಜಾತಿ ಜನರಿಗೂ ಸಾಮಾಜಿಕ ನ್ಯಾಯದಡಿ ಒಳಮೀಸಲಾತಿ ನೀಡುತ್ತಾರೆ. ಈ ನಂಬಿಕೆ ಯಾವುದೇ ಕಾರಣಕ್ಕೂ ಹುಸಿಯಾಗುವುದಿಲ್ಲವೆಂಬ ವಿಶ್ವಾಸ ಇದೆ ಎಂದಿದ್ದಾರೆ.

 

35 ವರ್ಷ ಕಾಲ ಹೋರಾಟದ ಹಾದಿ ಸವಿಸಿದ ಮಾದಿಗ ಸಮುದಾಯ, ಕಾಂಗ್ರೆಸ್ ಪಕ್ಷದ ಬದ್ಧತೆ, ನುಡಿದಂತೆ ನಡೆಯುವ ಸಿದ್ದರಾಮಯ್ಯ ಅವರ ಮೇಲೆ ಹೆಚ್ಚು ನಂಬಿಕೆ ಹೊಂದಿದೆ. ಇದೇ ಕಾರಣಕ್ಕೆ ಎಲ್ಲಿಯೂ ಅವರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. ಅಂಬೇಡ್ಕರ್ ಅವರ ಪ್ರತಿರೂಪ ಸಿದ್ದರಾಮಯ್ಯ ಎಂದೇ ಸಮುದಾಯ ಭಾವಿಸಿದೆ. ಆಗಸ್ಟ್ 16ರಂದು ಸಚಿವ ಸಂಪುಟದಲ್ಲಿ ಜಾರಿಗೊಳ್ಳುತ್ತಿದ್ದಂತೆ ಎಲ್ಲ ಮಾದಿಗರ ಮನೆಯಲ್ಲಿ ಅಂಬೇಡ್ಕರ್ ಜೊತೆಗೆ  ಸಿದ್ದರಾಮಯ್ಯ ಭಾವಚಿತ್ರ ಇರಲಿದೆ. ಜೊತೆಗೆ ಅಂದು ಮಾದಿಗರು ಸ್ವಾತಂತ್ರ್ಯ ದೊರೆತ ರೀತಿ ಸಂಭ್ರಮಿಸಲಿದ್ದಾರೆ. ಈ ಸಡಗರಕ್ಕೆ ಯಾವುದೇ ರೀತಿ ಅಡ್ಡಿಯಾಗದ ರೀತಿ ಆಗಸ್ಟ್ 16ರ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

 

ಉಪಸಮಿತಿ ರಚನೆ ಬೇಕಿಲ್ಲ : ಕೆಲ ಸಮುದಾಯದವರು ಅನಗತ್ಯವಾಗಿ ಗೊಂದಲ ಹುಟ್ಟುಹಾಕುವ  ಯತ್ನ ನಡೆಸುತ್ತಿದ್ದು, ಇವರ ಒತ್ತಡಕ್ಕೆ ಮನ್ನಣೆ ನೀಡಬಾರದು. ಮುಖ್ಯಮಂತ್ರಿಗಳು ಉಪ ಸಮಿತಿ ರಚನೆ ಮಾಡುವ ಒತ್ತಡಕ್ಕೆ ಸ್ಪಂದಿಸಬಾರದು. ಆಗಸ್ಟ್ 16ರಂದು ಅಂತಿಮ ನಿರ್ಧಾರ ಕೈಗೊಳ್ಳದಿದ್ದರೇ  ಮಾದಿಗ ಸಮುದಾಯ ಆತಂಕಕ್ಕೆ ಒಳಗಾಗಲಿದ್ದು, ಇದನ್ನು ಬೇರೆಯವರು ರಾಜಕೀಯ ಲಾಭ ಪಡೆಯಲು  ಬಳಸಿಕೊಳ್ಳುವ ಅಪಾಯ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಉಪಸಮಿತಿ ರಚನೆ, ಮತ್ತೊಂದು ಸಚಿವ ಸಂಪುಟಕ್ಕೆ ಮುಂದೂಡುವ ನಿರ್ಧಾರ ಕೈಗೊಳ್ಳಬಾರದು ಎಂದು ಆಂಜನೇಯ ಆಗ್ರಹಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST