LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅಂಬೇಡ್ಕರ್ ಜೀವನ-ಸಾಧನೆ ವಿದ್ಯಾರ್ಥಿಗಳಿಗೆ ದಾರಿದೀಪ: ಬಸವರಾಜ ಅಮಾತಿ

ಬಳ್ಳಾರಿ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ, ಅಧ್ಯಯನದ ಬದ್ಧತೆ ಮತ್ತು ದೇಶಕ್ಕೆ ನೀಡಿರುವ ಅಪಾರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳು ಸಮಗ್ರವಾಗಿ ತಿಳಿದುಕೊಳ್ಳಬೇಕು. ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಎದುರಾಗುವ ಕಷ್ಟಕರ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ಸಿನತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಇಂಡೋ ಅಮೆರಿಕನ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವರಾಜ ಅಮಾತಿ ಹೇಳಿದರು.

ನಗರದ ಸರ್ಕಾರಿ (ಮಾ.ಪು.) ಪದವಿ ಪೂರ್ವ ಸಂಯುಕ್ತ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ "ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು, ಬದುಕು ಮತ್ತು ಸಾಧನೆಗಳ ಪರಿಚಯ" ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪುಸ್ತಕ ರೂಪದಲ್ಲಿ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

news_1785259198_1_302.webp

 

ಡಾ. ಅಂಬೇಡ್ಕರ್ ಅವರು ತೀವ್ರ ಬಡತನ ಮತ್ತು ಸಾಮಾಜಿಕ ತಾರತಮ್ಯದ ನಡುವೆಯೇ ಬೆಳೆದು, ಶಿಕ್ಷಣವನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದರು. ತಮ್ಮ ಜ್ಞಾನ, ಚಿಂತನೆ ಮತ್ತು ದೂರದೃಷ್ಟಿಯ ಮೂಲಕ ಭಾರತೀಯ ಸಂವಿಧಾನದ ಶಿಲ್ಪಿಯಾಗಿ ದೇಶದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಆದರ್ಶಗಳು ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿವೆ ಎಂದು ಹೇಳಿದರು.

ಅಂಬೇಡ್ಕರ್ ಅವರು ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಓದುವ ಹವ್ಯಾಸವೇ ಅವರನ್ನು ವಿಶ್ವಮಟ್ಟದ ಚಿಂತಕರನ್ನಾಗಿ ರೂಪಿಸಿತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡು ಜ್ಞಾನವನ್ನು ಸಂಪಾದಿಸಬೇಕು. ಅಂಬೇಡ್ಕರ್ ಅವರ ಜೀವನವನ್ನು ಆದರ್ಶವಾಗಿಸಿಕೊಂಡು ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಜ್ಞಾನವರ್ಧಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಬೆಳೆಸುವ ಜೊತೆಗೆ ಸಂವಿಧಾನ, ಸಮಾಜ ಮತ್ತು ರಾಷ್ಟ್ರದ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

news_1785259198_0_257.webp

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ (ಮಾ.ಪು.) ಪದವಿ ಪೂರ್ವ ಸಂಯುಕ್ತ ಕಾಲೇಜಿನ ಪ್ರಾಚಾರ್ಯ ಸುಂಕಪ್ಪ ಕೆ. ಮಾತನಾಡಿ, ಸಂವಿಧಾನವನ್ನು ಅರ್ಥಮಾಡಿಕೊಂಡಾಗ ಮಾತ್ರ ವ್ಯಕ್ತಿ ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಅವರಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಹಾಗೂ ಓದುವ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಪ್ರತಿಯೊಬ್ಬ ನಾಗರಿಕನಲ್ಲೂ ಪ್ರಶ್ನಿಸುವ ಮನೋಭಾವ ಇರಬೇಕು. ಸಮಾಜದಲ್ಲಿನ ಬಡತನ ಮತ್ತು ಹಿಂದುಳಿದ ಸ್ಥಿತಿಗೆ ಮೂಢನಂಬಿಕೆಗಳೂ ಒಂದು ಪ್ರಮುಖ ಕಾರಣವಾಗಿದ್ದು, ವೈಜ್ಞಾನಿಕ ಮನೋಭಾವ ಮತ್ತು ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅವರು ತಿಳಿಸಿದರು.

ಒಳ್ಳೆಯ ಪುಸ್ತಕವು ಉತ್ತಮ ಸ್ನೇಹಿತನ ಸಮಾನ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಜೀವನ ಮೌಲ್ಯಗಳನ್ನು ತಿಳಿಸುವ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

news_1785259199_3_923.webp

 

ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ಬಳ್ಳಾರಿ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ ಪಿ.., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ