ಹುಬ್ಬಳ್ಳಿ ವಿಭಾಗದ ಆರ್‌ಪಿಎಫ್ ತಂಡವು ಜು.೮ರಂದು ಧಾರವಾಡ - ಹುಬ್ಬಳ್ಳಿ ರೈಲು ನಿಲ್ದಾಣಗಳ ನಡುವಿನ ರೈಲು ಸಂಖ್ಯೆ 18048 ಎಕ್ಸ್. ವಾಸ್ಕೋ-ಸಾಲಿಮಾರ್‌ನಲ್ಲಿ ವಿಶೇಷ ತಪಾಸಣೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಪ್ರಯಾಣಿಕರು ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದರು. ಪರಿಶೀಲನೆ ಸಮಯದಲ್ಲಿ ವಿವಿಧ ಬ್ರಾಂಡ್‌ಗಳ ಒಟ್ಟು 46 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ವಸ್ತುಗಳನ್ನು ಹುಬ್ಬಳ್ಳಿಯ ಆರ್‌ಪಿಎಫ್ ಪೋಸ್ಟ್ಗೆ ತರಲಾಗಿದೆ. ವಿಚಾರಣೆಗೊಳಪಡಿಸಿದ ಬಳಿಕ ಮದ್ಯದ ಬಾಟಲಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಹುಬ್ಬಳ್ಳಿಯ ಅಬಕಾರಿ ನಿರೀಕ್ಷಕರಿಗೆ ಹಸ್ತಾಂತರಿಸಲಾಯಿತು. ಅಬಕಾರಿ ಅಧಿಕಾರಿಗಳು ಈ ಸಂಬAಧ ಕರ್ನಾಟಕ ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಗೋವಾದಲ್ಲಿ ಮದ್ಯ ಕಡಿಮೆ ದರದಲ್ಲಿ ಲಭಿಸುತ್ತದೆ ಎನ್ನುವ ಕಾರಣಕ್ಕೆ ಕೆಲ ಪ್ರಯಾಣಿಕರು ಇದನ್ನು ದಂಧೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ರೈಲಿನಲ್ಲಿ ಬ್ಯಾಗ್ ಮತ್ತು ಇತರೆ ವಸ್ತುಗಳ ನಡುವೆ ಬಾಟಲಿಗಳನ್ನು ಸಾಗಿಸುವ ತಂತ್ರಗಾರಿಕೆಯನ್ನು ಕೆಲ ಪ್ರಯಾಣಿಕರು ರೂಢಿಸಿಕೊಂಡಿದ್ದಾರೆ. ಈ ಗುಮಾನಿಯ ಮೇರೆಗೆ ಆರ್ ಪಿ ಎಫ್ ತಂಡದವರು ಪರಿಶೀಲನೆ ನಡೆಸಿ, ಅನುಮತಿ ಮತ್ತು ಯಾವುದೇ ದಾಖಲೆ ಇಲ್ಲದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.