ಬೆಂಗಳೂರು : ಹೊಸ ವರ್ಷದಲ್ಲಿ ವಿದ್ಯುತ್ ದರ ಏರಿಕೆಯ ಬಿಸಿ ರಾಜ್ಯದ ಜನತೆಗೆ ತಟ್ಟಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಟಾಪ್-ಅಪ್ ಅಥವಾ ಟ್ರೂ-ಅಪ್ ಹೆಸರಿನಲ್ಲಿ ಪ್ರತಿ ಯೂನಿಟ್‌ಗೆ ೮ ರಿಂದ ೧೦ ಪೈಸೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹೊಂದಿದೆ.
ಕಳೆದ ಮಾರ್ಚ್‌ನಲ್ಲಿ ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಳ ಮಾಡಿದಾಗ ಮುಂದಿನ ೩ ವರ್ಷಗಳ ಕಾಲ ದರ ಏರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಆದರೆ ಮಾರುಕಟ್ಟೆಯ ಏರಿಳಿತ ಮತ್ತು ವಿದ್ಯುತ್ ಸರಬರಾಜು ಕಂಪೆನಿಗಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಈಗ ವಾರ್ಷಿಕ ಸಣ್ಣ ತಿದ್ದುಪಡಿ ಮಾಡಲು ನಿರ್ಧರಿಸಿದ್ದು, ಟಾಪ್-ಅಪ್ ಹೆಸರಿನಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ ೮ ರಿಂದ ೧೦ ಪೈಸೆ ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಬರುವ ವರ್ಷ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಗಳಿವೆ.
ಕಲ್ಲಿದ್ದಲು ಬೆಲೆ ಸ್ಥಿರತೆ ಮತ್ತು ನವೀಕರಿಸಬಹುದಾದ ಶಕ್ತಿಗೆ ಪ್ರಾಮುಖ್ಯತೆ ಕೊಡುವಿಕೆಯಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿರುವುದರಿಂದ ದರ ಇಳಿಕೆ ಅಸಾಧ್ಯ. ವೆಚ್ಚದ ಭಾರವನ್ನು ಗ್ರಾಹಕರಿಗೆ ವರ್ಗಾಯಿಸಲು ಟಾಪ್-ಅಪ್ ಅಗತ್ಯ ಎಂಬುದು ಕೆಇಆರ್‌ಸಿ ನಿಲುವಾಗಿದೆ.
ಕೆಇಆರ್‌ಸಿಯ ಈ ಪ್ರಸ್ತಾವಿತ ವಿದ್ಯುತ್ ದರ ಹೆಚ್ಚಳ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿ ನಂತರ ತನ್ನ ತೀರ್ಮಾನ ಪ್ರಕಟಿಸಲಿದೆ.